ನಕ್ಷತ್ರ ಗ್ರಹಣ -
ನಕ್ಷತ್ರಕ್ಕೂ ನಮಗೂ ನಡುವೆ ಆಕಾಶಕಾಯ ಅಡ್ಡ ಬಂದಾಗ ತಾತ್ಕಾಲಿಕವಾಗಿ ನಕ್ಷತ್ರ ಕಣ್ಮರೆಯಾಗುವ ವಿದ್ಯಮಾನ (ಅಕಲ್ಟೇಶನ್). ಹೀಗೆ ಅಡ್ಡಬರುವ ಕಾಯ ಸೂರ್ಯ, ಚಂದ್ರ, ಗ್ರಹ, ಉಪಗ್ರಹ ಯಾವುದೇ ಆಗಬಹುದು. ಇಲ್ಲವೇ ಬೇರೆಯ ಒಂದು ನಕ್ಷತ್ರವೂ ಆಗಬಹುದು. ಸೂರ್ಯಗ್ರಹಣ ಕೂಡ ಒಂದು ನಕ್ಷತ್ರಗ್ರಹಣವೇ. ಇಲ್ಲಿ ಅಡ್ಡಬರುವ ಕಾಯ ಚಂದ್ರ. ಆದರೆ ನಕ್ಷತ್ರ ಗ್ರಹಣ ಎಂಬ ಪದವನ್ನು ಸಾಮಾನ್ಯವಾಗಿ ಸೂರ್ಯನ ವಿನಾ ಇತರ ನಕ್ಷತ್ರಗಳು ಚಂದ್ರನಿಂದ ಮರೆಯಾಗುವ ವಿದ್ಯಮಾನವನ್ನು ಕುರಿತು ಬಳಸುವುದು ವಾಡಿಕೆ. ಚಂದ್ರನಿಂದ ನಿರ್ದಿಷ್ಟ ನಕ್ಷತ್ರವೊಂದರ ಗ್ರಹಣ ಯಾವಾಗ ಸಂಭವಿಸುವುದೆಂಬುದನ್ನು ಗಣನೆಗಳಿಂದ ಪೂರ್ವಭಾವಿಯಾಗಿ ನಿರ್ಧರಿಸುವುದು ಸಾಧ್ಯ. ಇಂಥ ವೀಕ್ಷಣೆಗಳಿಂದ ಚಂದ್ರನಲ್ಲಿ ವಾಯುಮಂಡಲವೇ ಇಲ್ಲ ಎಂಬುದು ಸಿದ್ಧವಾಯಿತು. ಇದೇ ತೆರನಾಗಿ ವೀಕ್ಷಣೆಗಳನ್ನು ಚಂದ್ರನ ಬದಲು ಗ್ರಹಗಳನ್ನು ಕುರಿತು ಮಾಡಿದಾಗ, ಉದಾಹರಣೆಗೆ ಶುಕ್ರ, ಅದರಲ್ಲಿ ವಾಯುಮಂಡಲ ಇರುವುದು ಸ್ಥಿರಪಟ್ಟಿತು. 1672ರ ಅಕ್ಟೋಬರ್ 1ರಂದು ಮಂಗಳಗ್ರಹ ಕುಂಭರಾಶಿಯ ಒಂದು ನಿರ್ದಿಷ್ಟ ನಕ್ಷತ್ರದ ಗ್ರಹಣವನ್ನು ಮಾಡಿತು ಎಂದು ಉಲ್ಲೇಖ ಉಂಟು. ಇದನ್ನು ಮಂಗಳಗ್ರಹದ ಇಂದಿನ ನೆಲೆಯೊಂದಿಗೆ ಪೊರ್ದಿಸುವಾಗ ಆ ನಕ್ಷತ್ರ ಅಂದಿನಿಂದ ಇಂದಿನ ತನಕ 5 ಕೋನ ಸೆಕೆಂಡುಗಳಷ್ಟು ಸ್ಥಾನವಿಚಲಿತವಾಗಿರುವುದು ತಿಳಿದುಬರುತ್ತದೆ. ಇದು ಭೂಮಿಯ ನಿಲುವಿನಲ್ಲಿನ ಸೂಕ್ಷ್ಮ ವ್ಯತ್ಯಾಸದಿಂದಾಗಿರಬಹುದು ಅಥವಾ ನಕ್ಷತ್ರದ ಚಲನೆಯ ಪರಿಣಾಮವಾಗಿರಬಹುದು ಅಥವಾ ಎರಡೂ ಚಲನೆಗಳ ಸಂಯುಕ್ತ ಫಲವಾಗಿರಬಹುದು. ಯುರೇನಸ್ ಗ್ರಹಕ್ಕೆ ಉಪಗ್ರಹಗಳ ಹೊನಲೇ ಇದೆ ಎಂಬ (1977) ಆವಿಷ್ಕಾರ ಯುರೇನಸಿನಿಂದ ನಕ್ಷತ್ರಗ್ರಹಣವನ್ನು ವೀಕ್ಷಿಸುತ್ತಿದ್ದಾಗ ಗೊತ್ತಾಯಿತು.
 (ಆರ್.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ